• 08194 222866
  • principal@sjmit.ac.in

SADBHAVANA DIWAS

 

ದಿನಾಂ:20.08.2025ರಂದು ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸದ್ಭಾವನೆ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಪೂಜ್ಯ ಡಾ.ಬಸವಕುಮಾರ ಸ್ವಾಮೀಜಿಗಳು ಮಾತನಾಡಿ, ಚಿಕ್ಕ ವಿಚಾರ ಎಂದುಕೊಳ್ಳುವ ವಿಷಯಗಳು ದೊಡ್ಡ ಬದಲಾವಣೆ ತರುತ್ತವೆ. ದೊಡ್ಡ ವಿಚಾರ ಎಂದುಕೊಳ್ಳುವ ವಿಷಯಗಳು ಹಾದಿ ತಪ್ಪಿಸುತ್ತವೆ. ಸದ್ಭಾವನೆ ಎನ್ನುವುದು ಒಂದು ದಿನಕ್ಕೆ ಮೀಸಲಾಗಬಾರದು. ಅದು ನಿತ್ಯ ನಿರಂತರವಾಗಿ ನಮ್ಮ ಬದುಕಿನುದ್ದಕ್ಕೂ ಇರಬೇಕು. ಸದಾ ಸದ್ಭಾವಿಗಳಾಗಿರಬೇಕು. ವಿದ್ಯಾರ್ಥಿಗಳು ಸಣ್ಣ ಸಣ್ಣ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಗುರುಹಿರಿಯರನ್ನು ಮಮತೆಯಿಂದ ಕಂಡು ಪ್ರೀತಿಯಿಂದ ಮಾತನಾಡಿಸಬೇಕು. ಆಗ ನಿಮ್ಮ ಸುತ್ತಮುತ್ತ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತದೆ.  ದ್ವೇಷ, ಅಸಹನೆ, ಅಸೂಯೆಗಳನ್ನು ತೊರೆದು ಬದುಕಬೇಕು. ಸದ್ಭಾವಿಯಾಗಲು ಮಾನಸಿಕ ಸಿದ್ಧತೆ ಬೇಕು.  ಸಿದ್ಧತೆ ಹೇಗಿರಬೇಕೆಂದರೆ, ಪ್ರತಿನಿತ್ಯ ಬೆಳಿಗ್ಗೆಯಿಂದ ರಾತ್ರಿಯವರೆಗೆ ನಮ್ಮ ನಡೆ ನುಡಿ, ಹಾವಭಾವ, ವರ್ತನೆಗಳಲ್ಲಿ ಸೂಕ್ಷ್ಮತೆಯನ್ನು ಕಲಿಯುತ್ತಾ ಹೋಗಬೇಕು. ತತ್ತ್ವಜ್ಞಾನ. ತಂತ್ರಜ್ಞಾನ, ವಿಜ್ಞಾನ ಎಲ್ಲವೂ ಮೊಬೈಲ್ ಮೂಲಕ ನಿಮ್ಮ ಅಂಗೈಯಲ್ಲಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಧ್ಯಯನಶೀಲರ, ಸಜ್ಜನರ ಸಹವಾಸ ಮಾಡಿ ಒಳ್ಳೆಯ ಆಲೋಚನೆಗಳನ್ನು, ಅಭಿರುಚಿಗಳನ್ನು ಬೆಳಸಿಕೊಳ್ಳಬೇಕು. ಎಷ್ಟೇ ಸಂಪಾದನೆ ಮಾಡಿರಲಿ, ಯಾವುದೇ ಅಧಿಕಾರವಿರಲಿ ನಮ್ಮ ನಡೆ ನುಡಿ ಅನ್ಯರಿಗೆ ಸಂತೋಷ, ಸಮಾಧಾನ ತಂದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ.ಭರತ್ ಪಿ ಬಿ ಮಾತನಾಡಿ, ನಮ್ಮ ದೇಶದ ಸಂಸ್ಕೃತಿಯು ವೈವಿಧ್ಯತೆ, ವಿಭಿನ್ನತೆಯಿಂದ ಕೂಡಿದೆ. ಭೌಗೋಳಿಕವಾಗಿ ಹಲವು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿವೆ. ಹಲವಾರು ಭಾಷೆಗಳಿವೆ. ಧಾರ್ಮಿಕವಾಗಿ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಸಿಖ್, ಸೂಫಿ, ಬುದ್ಧ, ಜೈನ ಹೀಗೆ ಹಲವು ಧರ್ಮಗಳಿವೆ. 700ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿವೆ. ಹೀಗೆ ನಮ್ಮ ದೇಶ ಹತ್ತು ಹಲವು ವೈವಿಧ್ಯತೆಯಿಂದ ಕೂಡಿದೆ. ರಾಷ್ಟ್ರಕವಿ ಕುವೆಂಪುರವರು ನುಡಿದಂತೆ ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟ. ಸಮಾಜದ ಸ್ವಾಸ್ಥ್ಯ ಕೆಡಿಸುವ ವದಂತಿಗಳಿಗೆ ವಿದ್ಯಾರ್ಥಿಗಳು ಕಿವಿಗೊಡದೇ ಮನಸ್ಸನ್ನು ಪ್ರಾಂಜಲವಾಗಿರಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು. ದೇಶದ ಐಕ್ಯತೆಗೆ ದಕ್ಕೆ ತರುವು ಯತ್ನಗಳು ದೇಶದ ಪ್ರಗತಿಗೆ ಮಾರಕವಾಗುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಕುಮಾರಸ್ವಾಮಿ ಬಿ ಜಿ, ಡಾ.ಸಿದ್ಧೇಶ್ ಕೆ ಬಿ, ಡಾ.ಕೃಷ್ಣಾರೆಡ್ಡಿ ಕೆ ಆರ್, ಡಾ.ಶಿವಕುಮಾರ್ ಎಸ್ ಪಿ, ಡಾ.ಅರವಿಂದ ಟಿ ವಿ, ಡಾ.ಚೇತನ್ ಎಸ್, ಶಿವಮೊಗ್ಗ ಜೆಎನ್ಎನ್ಸಿ ಇಂಜಿನಿಯರಿಂಗ್ ಕಾಲೇಜಿನ ಕೃತಕಬುದ್ಧಿಮತ್ತೆ ವಿಭಾಗದ ಮುಖ್ಯಸ್ಥ ಡಾ.ಚೇತನ್ ಕೆ.ಆರ್. ಉಪಸ್ಥಿತರಿದ್ದರು. ಪ್ರೊ.ನಾಗರಾಜ್ ಟಿ ಪ್ರತಿಜ್ಞಾವಿಧಿ ಬೋಧಿಸಿದರು.